ವಿ ಸೀತಾರಾಮಯ್ಯ (೧೮೯೯-೧೯೮೩)
ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ದಲ್ಲಿ ಪದವಿ ಪಡೆದು, ಅದೇ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಭಾಷೆ ಸಾಹಿತ್ಯಗಳಅಧ್ಯಾಪಕರಾಗಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡಿ ಕೃತಾರ್ಥರಾದ ಆಚಾರ್ಯರು ಅವರು. ಸೇವಾನಿವೃತ್ತಿಯ ನಂತರ ಕೆಲಕಾಲ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ producer (spoken word) ಹಾಗೂ ಹೊನ್ನಾವರದ ಕಲೆ- ವಿಜ್ಞಾನ ಕಾಲೇಜಿನ ಪ್ರಥಮ ಪ್ರಿನ್ಸಿಪಾಲರಾಗಿದ್ದು ಆಯಾ ಹುದ್ದೆಯ ಘನತೆಯನ್ನು ಹೆಚ್ಚಿಸಿದರು.
ವಿದ್ವತ್ತು ವೈಚಾರಿಕ ಮನೋಧರ್ಮ ಮತ್ತು ಬಹುಶ್ರುತತ್ವಗಳಿಗೆ ಹೆಸರಾಗಿದ್ದ ವಿ.ಸೀ. ಕನ್ನಡ- ಇಂಗ್ಲಿಷ್ ಎರಡು ಭಾಷೆಗಳಲ್ಲಿ ಹೆಚ್ಚು ಕೃತಿ ಪ್ರಕಟಿಸಿದರು. ಕಾವ್ಯ, ನಾಟಕ, ಲಲಿತ ಪ್ರಬಂಧ, ವ್ಯಕ್ತಿ ಚಿತ್ರ, ನೆನಪಿನ ಚಿತ್ರ, ಜೀವನ ಚರಿತ್ರೆ, ಸಾಹಿತ್ಯ ವಿಮರ್ಶೆ, ಅನುವಾದ ಇತ್ಯಾದಿ ಪ್ರಕಾರಗಳಲ್ಲಿ ಸಮರ್ಥ ಕೃಷಿ ಮಾಡಿದ ಸಿದ್ಧಹಸ್ತರು. ಮಾತ್ರವಲ್ಲ, ಅರ್ಥಶಾಸ್ತ್ರ, ಧರ್ಮಶಾಸ್ತ್ರ, ಕಾನೂನು- ನ್ಯಾಯ- ರಾಜ್ಯಾಂಗ ತತ್ವ, ಕಲಾ ಮೀಮಾಂಸೆ ಹಾಗೂ ಮಾನವಿಕ ಕ್ಷೇತ್ರಗಳಲ್ಲಿಯೂ ಮೌಲಿಕ ಕೊಡುಗೆ ನೀಡಿದ ಧೀಮಂತರು. ‘ಮನೆ ತುಂಬಿಸುವುದು' ಕಸ್ಮೈದೇವಾಯ, ಶಬರಿ, ಸೆಳೆ, ಅಭೀಃ, ಸ್ನೇಹ- ವಿಶ್ವಾಸ, ಮೃಗಶಾಲೆಯಸಿಂಹಗಳು, ಕ್ರೋಧಕೇತನಗಳಂತಹ ಚಿರಂತನ ಕವಿತೆಗಳ ಕವಿ; ಪಂಪಾಯಾತ್ರೆಯಂತಹ ಪ್ರವಾಸಕಥನ, ಹಣಪ್ರಪಂಚದಂತಹ ಅರ್ಥಶಾಸ್ತ್ರೀಯ ಕೃತಿ; ಮಹನೀಯರು,ಹಿರಿಯರು -ಗೆಳೆಯರು ಗಳಂತಹ ಅಪೂರ್ವ ವ್ಯಕ್ತಿಚಿತ್ರ ಸಂಪುಟ; ವಾಲ್ಮೀಕಿ ರಾಮಾಯಣ,ಮಹಾಭಾರತದ ಕೃಷ್ಣಚಾರಿತ್ರ,ಅಭಿಜ್ಞಾನ ಶಾಕುಂತಲ ನಾಟಕ, ಮಹಾಕವಿ ಪಂಪ, ಮುಂತಾದ ರಸಸ್ಯಂದಿ ವಿಮರ್ಶಾಸಾಹಿತ್ಯವನ್ನು ನೀಡಿರುವ ಗದ್ಯ ಪ್ರಭು.
ಕನ್ನಡ ಇಂಗ್ಲಿಷ್ಗಳಲ್ಲಿ ಶ್ರೇಷ್ಠ ವಾಗ್ಮಿ; ನಾಡಿನ ಸಾಂಸ್ಕೃತಿಕ ಏಕೀಕರಣಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರೋಭಿವೃದ್ದಿಗೆ ಶ್ರಮಿಸಿದ ನುಡಿ ಸೇವಕ: ಕನ್ನಡ ನುಡಿ,ಸಾಹಿತ್ಯ ಪರಿಷತ್ ಪತ್ರಿಕೆ; ಪ್ರಬುದ್ಧ ಕರ್ನಾಟಕಗಳಂತಹ ವಿದ್ವತ್ಪತ್ರಿಕೆಗಳ ಸಂಪಾದಕ; ಕೇಂದ್ರ ಸಾಹಿತ್ಯ ಅಕಾಡೆಮಿ, ಭಾರತೀಯ ಜ್ಞಾನಪೀಠ ಸಂಸ್ಥೆಗಳ ಪ್ರಶಸ್ತಿ ಸಲಹಾ ಮಂಡಳಿಗಳ( ಕನ್ನಡ) ಸದಸ್ಯ; ಕುಮಟಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ; ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳ ಪ್ರಶಸ್ತಿ ವಿಜೇತ;ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ವಿ.ಸೀ. ವಿಶಿಷ್ಟ ವೇಷಭೂಷಣಗಳಿಗೆ ಹೆಸರಾಗಿದ್ದಂತೆಯೇ ತಮ್ಮ ಸ್ನೇಹ ಸಜ್ಜನಿಕೆ , ಹೃದಯವಂತಿಕೆ,ರಸಿಕತೆ ಮತ್ತು ಮತ್ತೊಂದು ಹೆಸರಾಗಿದ್ದ ಅವರದು ಸರ್ವಮಾನ್ಯ ವ್ಯಕ್ತಿತ್ವ.