ಮಣಿಯದಿಹ ಮನವೊಂದು, ಸಾಧಿಸುವ ಹಠವೊಂದು
ನಿಜದ ನೇರಕೆ ನಡೆವ ನಿಶ್ಚಲತೆಯೊಂದು
ಅನ್ಯಾಯಕೆಂದೆಂದು ಬಾಗದೆಚ್ಚರವೊಂದು
ಮರುಕಕ್ಕೆ ಪ್ರೇಮಕ್ಕೆ ಚಿರತೆರೆದ ಎದೆಯೊಂದು
ಅಭೀಃ ಅಭೀಃ ಅಭೀಃ
- ವಿ.ಸೀ. ( ದೀಪಗಳು, ೧೯೩೩)
ವಿ.ಸೀ. ಅವರ ಬಗ್ಗೆ ಪ್ರಮುಖರ ಕೆಲವು ಮಾತುಗಳು
ಕೆ ಎಸ್ ನರಸಿಂಹಸ್ವಾಮಿ
ಕೇವಲ ಪುಸ್ತಕ ಬರೆದು ಒಂದು ದೇಶ ಉದ್ಧಾರವಾಗಿಲ್ಲ. ಉಪನ್ಯಾಸದಿಂದಲೇ ಒಂದು ಜನಾಂಗ ಉದ್ಧಾರವಾಗಿಲ್ಲ. ಅದರ ಉತ್ತಮ ಸಂಸ್ಕೃತಿಯಿಂದ ಅದು ತಲೆ ಎತ್ತಿ ಬಾಳುತ್ತದೆ. ಅಂತಹ ಒಂದು ಉತ್ತಮ ಸಂಸ್ಕೃತಿಯ ಪ್ರತಿನಿಧಿಗಳು ವಿ.ಸೀ. ಅವರು.
ರಂಗನಾಥ ಶರ್ಮ
ಸಾವಿರಾರು ವರ್ಷಗಳಿಂದ ಬೆಳೆದು ಸಂಪುಷ್ಟವಾದ ಭಾರತೀಯ ಸಂಸ್ಕೃತಿ ಯಾವುದು- ಎಂದು ಕೇಳಿದರೆ ನಾನು ವಿ. ಸೀತಾರಾಮಯ್ಯನವರನ್ನು ಬೆರಳಿಟ್ಟು ತೋರಿಸುತ್ತೇನೆ. ತನ್ನ ಸೌರಭ ಸೌಭಾಗ್ಯ ಕೋಮಲತೆಗಳಿಂದ ಎಲ್ಲರಿಗೂ ಬೇಕಾದ ಯಾರನ್ನು ನೋಯಿಸದ ಅರಳಿದ ಮಲ್ಲಿಗೆ ಹೂ ವಿ.ಸೀ.
ಶಿವರಾಮ ಕಾರಂತ
ತಮ್ಮ ಸಂಪರ್ಕಕ್ಕೆ ಬಂದ ಹಲವರ ಮನಸ್ಸಿನಲ್ಲಿ ಅಚ್ಚೆ ಉಳಿದ ವ್ಯಕ್ತಿ ವಿ.ಸೀ. ಅವರ ಜೀವನ ಸರಳ, ಮಧುರ, ವಿರಳ. ಅಷ್ಟೊಂದು ಸುಂದರ ಬದುಕನ್ನು ಅವರು ಹೇಗೆ ನಡೆಯಿಸಲು ಶಕ್ತರಾದರು ಎಂಬುದು ಒಂದು ಸೋಜಿಗದ ಸಂಗತಿಯೇ.
ಶಿವರಾಮ ಕಾರಂತ
ಲೋಕದಲ್ಲಿ ಅನೇಕರು ಅನೇಕ ರೀತಿಯಿಂದ ಕೆಡುತ್ತಾರೆ. ಅದರಲ್ಲಿ ಸದಭಿರುಚಿಯಿಂದ ಯಾರಾದರೂ ಕೆಟ್ಟ ಹೋದವರು ಇದ್ದರೆ ಅದು ವಿ.ಸೀ. ಎನ್ನುತ್ತೇನೆ ನಾನು.
ಎಚ್ ವೈ. ಶಾರದಾಪ್ರಸಾದ್
ವಿ.ಸೀ ಅವರ ಆಸಕ್ತಿಗಳನ್ನೆಲ್ಲ ವಿವರವಾಗಿ ಹೇಳ ಹೊರಟರೆ ಇಂತಹ ಒಬ್ಬ ವ್ಯಕ್ತಿ ಇರುವುದೇ ಅಸಂಭವವೆಂದು ಅವರನ್ನು ಪ್ರತ್ಯಕ್ಷವಾಗಿ ಕಾಣದೇ ಇದ್ದವರಿಗೆ ತೋರೀತು. ಇಂತಹ ಒಂದು ಸರ್ವಂಕಷ ವ್ಯಕ್ತಿತ್ವ ವಿ.ಸೀ. ಅವರದು.
ಪಿ.ವಿ. ಜೋಶಿ
ವಿ.ಸೀ ಅವರನ್ನು ನೆನೆಸಿಕೊಂಡಾಗಲೆಲ್ಲ ಅವರ ಹಿರಿಮೆ, ವಾತ್ಸಲ್ಯ, ವಿಚಾರ ಗಾಂಭೀರ್ಯ, ಹೃದಯವೈಶಾಲ್ಯ, ವಿಸ್ಮಯ ತರಿಸುವಂಥ ಬಹುಮುಖ ಪಾಂಡಿತ್ಯ, ಜ್ಞಾನದಾಹ, ಸೌಂದರ್ಯಪ್ರಜ್ಞೆ ಮನಃ ಪಟಲವನ್ನು ತುಂಬುತ್ತವೆ.
ಮಾಸ್ತಿ ವೆಂಕಟೇಶ ಅಯ್ಯಂಗಾರ್
ವಿ. ಸೀ ಸೊಗಸಾದ ಉಪಾಧ್ಯಾಯರಾಗಿದ್ದರು. ತಮ್ಮ ಕೆಲಸಗಳಲ್ಲಿ ತುಂಬಾ ನಿಷ್ಠಾವಂತ ರಾಗಿದ್ದರು. ಅಂತ ದಕ್ಷ ಮತ್ತು ಸಹೃದಯರನ್ನು ಪಡೆದಿರುವುದು ಕನ್ನಡ ಸಂಸ್ಕೃತಿಯ ಪುಣ್ಯ.
ಎಲ್.ಎಸ್. ಶೇಷಗಿರಿ ರಾವ್
“ಬರಹಗಾರರಾಗಿ ವಿ. ಸೀ ಅವರ ರಚನೆಗಳ ಹರವು ಬಹು ವಿಸ್ತಾರವಾದದ್ದು. ವೈವಿಧ್ಯ ಶ್ರೀಮಂತವಾದದ್ದು. ಕವಿ ನಾಟಕಕಾರ ಪ್ರಬಂಧಕಾರ ವ್ಯಕ್ತಿತ್ವಗಳನ್ನು ಮಾತುಗಳಲ್ಲಿ ಕಡೆದು ನಿಲ್ಲಿಸುವ ಶಿಲ್ಪಿ; ನೆನಪುಗಳ ಭಂಡಾರವನ್ನು ತೆರೆದಿಡಬಲ್ಲ ಭಾಗ್ಯವಂತ, ಚಿಂತನೆಯನ್ನು ಎಬ್ಬಿಸುವ ವೈಚಾರಿಕ ಬರಹಗಾರ, ವಿಮರ್ಶಕ. ಅರ್ಥಶಾಸ್ತ್ರದಲ್ಲಿ ಕನ್ನಡದಲ್ಲಿ ಪ್ರಾರಂಭದಲ್ಲಿ ಬಂದ ಕೃತಿಯನ್ನು ಕೊಟ್ಟ ತಜ್ಞ ಸಮರ್ಥ ಅನುವಾದಕ ಕನ್ನಡದಲ್ಲಿ ಹೇಗೆಯೋ ಹಾಗೆಯೇ ಇಂಗ್ಲೀಷಿನಲ್ಲಿಯೂ ಭಾಷೆಯ ಪ್ರಭು .. .. ...
ಜಿ.ಪಿ. ರಾಜರತ್ನಂ
ಹೊಸಗನ್ನಡ ಕವಿತೆಗಳನ್ನು ಹೇಗೆ ಓದುವುದು ಎಂದು ನಮಗೆ ಕಲಿಸಿದವರು ವಿ.ಸೀತಾರಾಮಯ್ಯನವರು.
ಕೆ.ಎಸ್. ನಿಸಾರ್ ಅಹಮದ್
ವಿ.ಸೀ. ಒಬ್ಬ ಮಾರ್ಗದರ್ಶಕ ಶಿಕ್ಷಕರಾಗಿ ವಾಗ್ವಿಲಾಸೀ ವಾಗ್ಮಿಗಳಾಗಿ ಕಳೆದ ಶತಮಾನದ ಪೂರ್ವಾರ್ಧದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಪುರೋಭಿವೃದ್ಧಿಯ ಪ್ರಚಾರಕರಾಗಿ ಮತ್ತು ಎಲ್ಲಕ್ಕೂ ಮುಡಿಗಟ್ಟಿದಂತೆ ಒಬ್ಬ ಸ್ನೇಹಮಯ ಸದ್ವ್ಯಕ್ತಿಯಾಗಿ ಬದುಕಿ ಬಾಳಿದ ಸಾಧನಶೀಲ ಚೇತನ.